Saturday, July 20, 2013

ಧ್ಯಾನದ ನಡುವೊಮ್ಮೆ

ಶಬ್ಧಗಳೊಡಲೊಳಗೆ
ವಿರುದ್ಧಾತ್ಮಕತೆಗಳ
ಪೂರಕ ತತ್ವದಡಿ
ನಿಶ್ಯಬ್ಧ ಹುಡುಕಿ
ತಲೆಗೇರಿಸಿಕೊಂಡೆ...

ಅರೆ ಪದ್ಮಾಸದ
ಧ್ಯಾನಮುದ್ರೆಯಲಿ
ದೀರ್ಘ ಶ್ವಾಸದ
ನಿರಾಳತೆಯಲಿ
ಮುಚ್ಚಿದ ಕಣ್ಣಡಿಯೇನೋ
ಮಹತ್ತು ಕಾಣುವ
ಭರವಸೆಯಲಿದ್ದೆ..

ನಿಶ್ಯಬ್ಧ ಮೌನವಾಗಿ
ಎದೆಗಿಳಿದು.....
ಎಡ, ಬಲ, ಮೇಲೆಕೆಳಗೆಲ್ಲಾ
ಆವರಿಸಿ ಎತ್ತಲೋ ಹೊತ್ತೊಯ್ದು
ನಾ ಕಳೆದು ಹೋದ ಗಳಿಗೆ..
ಬೇಕಾದ್ದೇನೋ ಸಮೀಪಿಸಿದ ಹಾಗೆ,
ಮೆಲ್ಲ ಮುಟ್ಟಿ ಛೇಡಿಸುವ ಮಗು
ಮತ್ತೆ ದೂರಕೋಡಿದ ಹಾಗೆ..
 
ಇನ್ನೇನು ನಸುನಗು ಆ ಮಗುವ
ಹಿಡಿದು ಬಿಡುತಿತ್ತು, ಅಷ್ಟರಲಿ..
ಮುರಿದು ಚಂದ ದೃಶ್ಯಾವಳಿ
ಸರಪಳಿ, ಎಲ್ಲಾ ಚಲ್ಲಾಪಿಲ್ಲಿ...
ಹಸಿದ ಹೊಟ್ಟೆಯ ಎಲುಬು,
ಕಜ್ಜಿನಾಯಿಯ ಕೂಗು,
ತೆರಳಿದ ಬಂಧಗಳ ನೋವು,
ಮುರಿದ ಬಂಧಗಳ ಅಳು,
ತುಳಿತದಡಿಯ ಕಣ್ಣೀರು..

ಹೀಗೇ...
ಇಲ್ಲಗಳ ಸರದಿಸಾಲಿನ ಮುಂದೆ
ಬೇಕುಗಳೆಲ್ಲಾ ನಿಲುಕದೆತ್ತರದ
ಕಪಾಟಿನ ಹಲಬೀಗದೊಳಗೆ
ಭದ್ರವಾಗಿರುವೆಡೆ ಸಾಗುತಾ ಆಸೆ,
ಬೆಳೆಬೆಳೆದು ನಿರಾಸೆಯಾಗಿ ಬಿಟ್ಟ ಗೋಳು..
ಕಣ್ಬಿಡಿಸಿತು, ತಲೆ ತಿರುಗಿತು..

ಭ್ರೂ ಮಧ್ಯವೇ ಇರಲಿ
ನೆತ್ತಿ ಮಧ್ಯವೇ ಇರಲಿ
ಇದ್ದುದೆಲ್ಲ ಹಾಗೇ ಇರಲಿ.
ತುಂಬಿದ ಹೊಟ್ಟೆಯ
ಮೇಲಿನವು ಬೆಳಕಾಗುವ ಬದಲು
ಹಸಿದುದು ತಣಿವುದಾಗಲಿ...
ಬಿಚ್ಚಿದೆವೆ ಮತ್ತೆ ಮುಚ್ಚಿದವು
ಆಗ ಬೇಕೆನಿಸಿದುದ
ಕೈ ದೂರ ಸರಿಸಿತು,
ಇಲ್ಲಗಳ ಆಸೆ ನಿರಾಸೆಯಾಗುವಷ್ಟು
ಬೆಳೆಯದಿರುವ ಆಶಯ
ಧ್ಯಾನದ ಕೇಂದ್ರವಾಯಿತು.

2 comments:

  1. ನೆಮ್ಮದಿ - ಚಿಂತನೆ - ಧ್ಯಾನ ಇನ್ನಿತರೆ ಮನೋವ್ಯಾಪಾರಗಳಿಗೆ ಖಾಲಿ ಹೊಟ್ಟೆ ತುಂಬಿದರೇನೇ ಸಿದ್ದಿ! ಹಲಬೀಗಗಳು ಭದ್ರಪಡಿಸುವ ಪರಿಯಾದರೂ ಹಾಗೇ.

    ಒಳ್ಳೆಯ ಹೂರಣ ಮತ್ತು ಪ್ರಯೋಗ.

    ReplyDelete