Thursday, January 31, 2013

ವ್ಯೆತ್ಯಾಸ ಹೆಚ್ಚೇನಿಲ್ಲ...


----------------------------------

ಊರ ನಡುವಲೊಂದು ಗುಡಿ,

ಮೂಲೆಯಲೊಂದು ಗುಡಿಸಲು.

ದೀಪ ಉರಿದಿವೆಯಲ್ಲಿ ದೀಪದೆಣ್ಣೆ ನುಂಗಿ

ಇಲ್ಲೂ ಉರಿದಿವೆ ಹೆಣ್ಣ ಕಣ್ಣೀರ ನುಂಗಿ

ವ್ಯೆತ್ಯಾಸ ಹೆಚ್ಚೇನಿಲ್ಲ...



ಅಲ್ಲಿ ಮೊಳಗಿ ಮಾರ್ದನಿಸಿವೆ

ಘಂಟೆಜಾಗಟೆ ಶಂಖನಾದ

ಇಲ್ಲೂ ಮೊಳಗಿದೆ

ನಿತ್ಯ ನಿಶ್ಯಬ್ಧ ರೋದನ.



ಅಲ್ಲಿ ಸಾರಿವೆ ಕಣಕಣವು

ಮುಕ್ತಿಸಾಧನೆಯ ಗುಟ್ಟು

ಇಲ್ಲೂ ಸಾರಿವೆ ಗೋಡೆಬಾಗಿಲು

ಅನುದಿನದ ಹುಟ್ಟುಸಾವು.



ಅಲ್ಲಿ ಅರ್ಪಣೆಯಾಗಿದೆ

ತನ್ನತನ ಭಕ್ತಿಯಡಿಯಾಳಾಗಿ.

ಇಲ್ಲೂ ಅದೇ ಆಗಿದೆ

ಹೊಟ್ಟೆಬುತ್ತಿಯ ತುತ್ತಿಗಾಗಿ.



ಅಲ್ಲಿ ಮೈಮರೆವ ತಾದಾತ್ಮ್ಯ

ನರನಾರಾಯಣ ಕೂಟ

ಇಲ್ಲಿ ಮೈಮರೆತಿದೆ ವಿಕಾರ

ದೇಹಗಳೆರಡರ ಮೇಳ.



ಅಲ್ಲಿ ಕಾಣಿಕೆ ಹುಂಡಿಗೆ..

ಕೆರೆಯ ನೀರನು ಕೆರೆಗೆ ಚೆಲ್ಲಿ

ಇಲ್ಲೂ ಚೆಲ್ಲಿದೆ ಕಾಸು

ಉಬ್ಬುತಗ್ಗಿಗಷ್ಟು ಬೆಲೆ ಕಟ್ಟಿ.



ಹೊರಹೊರಟ ಮನಸಲ್ಲಿ ಹಗುರ

ತುಮುಲ ಕಳೆದು ಶಾಂತಿ ಹೊತ್ತು.

ಇಲ್ಲೂ ಹಗುರಾಗಿದೆ, ಕೊಟ್ಟುಬಿಟ್ಟು

ಅಷ್ಟೆಷ್ಟೋ ದುಡ್ದ ಜೊತೆಗೆ ದುಗುಡ.



ಹಗುರಾಗಿಸುವ ಚೈತನ್ಯಕಲ್ಲಿ ಆರತಿ

ಇಲ್ಲದೇ ಚೇತನವಿದೆ, ಆರತಿಯಷ್ಟೆ ಇಲ್ಲ.

ಅಲ್ಲಿಯದು ನಿರ್ಜೀವ ದೈವಬಿಂಬವಾದರೆ,

ಇದು ಜೀವಂತಿಕೆ ನೇಣಿಗೇರೋ ಗಲ್ಲುಗಂಬ.











4 comments:

  1. ಅಲ್ಲಿಯದು ನಿರ್ಜೀವ ದೈವಬಿಂಬವಾದರೆ,
    ಇದು ಜೀವಂತಿಕೆ ನೇಣಿಗೇರೋ ಗಲ್ಲುಗಂಬ....
    :::
    ಯಾಕೋ ಮೌನವಷ್ಟೇ ಉಳಿದಂತ ಭಾವ....

    ReplyDelete
  2. ಬರೆದು ಮುಗಿಸಿದಾಗ ನನಗೂ ಒಮ್ಮೆ ಎಲ್ಲ ಖಾಲಿಖಾಲಿಯಾದಂತೆ... ಕಣ್ಣು ಮಾತ್ರ ತುಂಬಿಬಂದಂತೆ ..

    ReplyDelete
  3. ಕವಿತೆಯ ಕಡೆಯ ಸಾಲುಗಳು ಅಲುಗಾಡಿಸಿ ಹಾಕಿದವು.

    ಎಂದು ಬದಲಾದೀತೋ ಮನುಜ ಮತ?

    ReplyDelete
    Replies
    1. ಆ ವ್ಯವಸ್ಥೆಯ ಉಳಿವು ಅಳಿವಿನ ವಿಷಯದಲ್ಲಿ ಮನುಜಮತ ಬದಲಾಗುವ ಬಗ್ಗೆ ಅಪೇಕ್ಷೆಯೂ ಇಲ್ಲ ನಂಬಿಕೆಯೂ ಇಲ್ಲ, ಆದರೆಅದನ್ನ ಮತ್ತೆ ಅದರೊಳಗಿನ ಬಂಧಿಗಳನ್ನ ನೋಡುವ ದೃಷ್ಟಿ ಬದಲಾಗುವ ಬಗ್ಗೆ ಎಲ್ಲೋ ಒಂದು ಸಣ್ಣ ಆಸೆ.

      Delete